ಹಿಕ್ಕಿ, ಜೇಮ್ಸ್ ಆಗಸ್ಟಸ್
	? - 1782. ಭಾರತೀಯ ಪತ್ರಿಕೋದ್ಯಮದ ಪಿತಾಮಹ ಎಂದು ಕರೆಯಲಾದ ಪ್ರಸಿದ್ಧ ಪತ್ರಿಕೋದ್ಯಮಿ. ಈತ ಭಾರತದ ಪತ್ರಿಕೋದ್ಯಮದ ಜನಕ. ಭಾರತದ ಮೊಟ್ಟಮೊದಲ ಪತ್ರಿಕೆಯನ್ನು ಪ್ರಾರಂಭಿಸಿದ ಕೀರ್ತಿ ಇವನಿಗೆ ಸಲ್ಲುತ್ತದೆ. 1780 ಜನವರಿ 29ರಂದು ಈತ ಪ್ರಾರಂಭಿಸಿದ ಮೊಟ್ಟಮೊದಲ ಪತ್ರಿಕೆ. ದಿ ಬೆಂಗಾಲ್ ಗೆಜೆಟ್, ಇದನ್ನು, ಹಿಕ್ಕಿಗೆಜೆಟ್ ಅಥವಾ ದಿ ಕಲ್ಕತ್ತಾ ಜನರಲ್ ಅಡ್ವರ್ಟೈಸರ್ ಎಂದು ಕರೆಯಲಾಗುತ್ತಿತ್ತು. ಈ ಪತ್ರಿಕೆಗೆ ಈತನೇ ಸಂಪಾದಕ, ಪ್ರಕಾಶಕ ಮತ್ತು ಮುದ್ರಕನಾಗಿದ್ದ. ವಾರಪತ್ರಿಕೆ ಯಾದ ಹಿಕ್ಕಿಗೆಜೆಟ್ ಪ್ರಾರಂಭದಲ್ಲಿ ಎರಡು ಪುಟಗಳನ್ನು ಹೊಂದಿತ್ತು. 12 ಇಂಚು ಉದ್ದ ಹಾಗೂ 8 ಇಂಚು ಅಗಲ ಅಳತೆಯ ಈ ಪತ್ರಿಕೆಯ ಮುದ್ರಣ ಸಾಧಾರಣಮಟ್ಟದಾಗಿತ್ತು. ಜಾಹೀರಾತು ಹಾಗೂ ಸುದ್ದಿಗಳೆರಡನ್ನೂ ಈ ಪತ್ರಿಕೆ ಪ್ರಕಟಿಸುತ್ತಿತ್ತು. ಈತ ಈ ಪತ್ರಿಕೆಯನ್ನು ರಾಜಕೀಯ ಹಾಗೂ ವಾಣಿಜ್ಯವಾರಪತ್ರಿಕೆ ಎಂದೂ ಕರೆದಿದ್ದಾನೆ.

	ಈತ ಒಬ್ಬ ಬ್ರಿಟಿಷ್‍ಪ್ರಜೆ. ಮೂಲತಃ ವ್ಯಾಪಾರಿಯಾಗಿ ಭಾರತಕ್ಕೆ ಬಂದ ಈತ ವ್ಯಾಪಾರದಲ್ಲಾದ ನಷ್ಟವನ್ನು ತುಂಬಿಸಲಾರದೆ ಸೆರೆಮನೆವಾಸವನ್ನು ಅನುಭವಿಸಬೇಕಾಯಿತು. ಬಿಡುಗಡೆಯಾದ ಮೇಲೆ ಜೀವನ ಸಾಗಿಸಲು ಮುದ್ರಣ ಕ್ಷೇತ್ರವನ್ನು ಆಯ್ಕೆಮಾಡಿಕೊಂಡ. ಈತ ಈಸ್ಟ್ ಇಂಡಿಯ ಕಂಪನಿಯಲ್ಲಿ ಮುದ್ರಕನಾಗಿ ಸೇವೆಸಲ್ಲಿಸಿದ್ದ. ಇದೇ ಕಾರಣಕ್ಕಾಗಿ ಇವನು ಅಚ್ಚುಮೊಳೆಯ ಮುದ್ರಣಾಲಯವನ್ನು ಸಿದ್ಧಪಡಿಸಿ ಕೊಂಡು ಮುದ್ರಕನಾಗಿ ಯಶಸ್ಸುಕಂಡ. ಅನಂತರ ಪತ್ರಿಕೆ ಪ್ರಕಟಿಸುವ ಯೋಜನೆಹಾಕಿದ ಈತ ಈ ಕ್ಷೇತ್ರದಲ್ಲೂ ಯಶಸ್ಸು ಸಾಧಿಸಿ ಇತಿಹಾಸ ನಿರ್ಮಿಸಿದ.

	ಈತನ ವ್ಯಕ್ತಿತ್ವ ವಿಶಿಷ್ಟವಾದುದು. ಬ್ರಿಟಿಷ್ ಪ್ರಜೆಯಾದರೂ ಈತ ಬ್ರಿಟಿಷರ ಗುಲಾಮಗಿರಿ ಪದ್ಧತಿಯನ್ನು ಖಂಡಿಸಿದ. ವ್ಯಕ್ತಿಸ್ವಾತಂತ್ರ್ಯವನ್ನು ಅಪಾರವಾಗಿ ಗೌರವಿಸುತ್ತಿದ್ದ. ಒಬ್ಬ ಬ್ರಿಟಿಷ್ ಪ್ರಜೆಯಾಗಿದ್ದರೂ ಭಾರತದ ಸ್ವಾತಂತ್ರ್ಯದ ಮಹತ್ತ್ವವನ್ನು ಅರಿತು, ಪತ್ರಿಕೆಯ ಮೂಲಕ ಈ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸುವ ಶ್ಲಾಘನೀಯ ಪ್ರಯತ್ನವನ್ನು ಮಾಡಿದ. ವಾಕ್ ಸ್ವಾತಂತ್ರ್ಯ ಮಾನವನ ಜನ್ಮಸಿದ್ಧಹಕ್ಕು ಎಂದು ಜೀವನದುದ್ದಕ್ಕೂ ಪ್ರತಿಪಾದಿಸಿದ. ದೃಢಮನಸ್ಸು, ನೈತಿಕ ಧರ್ಮ, ಹೋರಾಟಮನೋಧರ್ಮ ಹಾಗೂ ಸತ್ಯಶೋಧಕ ಮನೋಭಾವದ ಗುಣಗಳಿಂದಾಗಿ ಈತ ಮಾದರಿ ಪತ್ರಿಕೋದ್ಯಮಿಯಾಗಿದ್ದಾನೆ. ಬ್ರಿಟಿಷ್ ಸರ್ಕಾರದ ವಿರುದ್ಧ ಬರೆಯುತ್ತಿದ್ದುದರಿಂದ ಈತ ಜೈಲುಶಿಕ್ಷೆಯನ್ನು ಅನುಭವಿಸಬೇಕಾಯಿತು. ಇಂಥ ಸಂದರ್ಭದಲ್ಲಿ ಜೈಲಿನಿಂದಲೇ ತನ್ನ ಪತ್ರಿಕೆಯನ್ನು ನಡೆಸಿದ. ತರುವಾಯ ಇವನ ವಿರುದ್ಧ ಉಗ್ರಕ್ರಮ ಕೈಗೊಂಡ ಬ್ರಿಟಿಷ್ ಸರ್ಕಾರ 1782ರಲ್ಲಿ ಇವನ ಮುದ್ರಣಾಲಯ ಮತ್ತು ಪತ್ರಿಕಾ ಕಚೇರಿಯನ್ನು ವಶಪಡಿಸಿಕೊಂಡಿತು. ಪತ್ರಿಕಾ ಸ್ವಾತಂತ್ರ್ಯವನ್ನು ಕಾಪಾಡಬೇಕೆಂದು ಈತ ಸರಕಾರಕ್ಕೆ ಬರೆದ ಮನವಿಪತ್ರಗಳಿಗೆ ಮನ್ನಣೆ ಸಿಗಲಿಲ್ಲ. ಇವನ ಸ್ನೇಹಿತರು ಪತ್ರಿಕೆಯನ್ನು ಉಳಿಸಿಕೊಳ್ಳಲು ನಡೆಸಿದ ಹೋರಾಟ ಫಲಪ್ರದವಾಗಲಿಲ್ಲ. ಆರ್ಥಿಕ ಸಂಕಷ್ಟ ಹಾಗೂ ಸರಕಾರದ ದಮನನೀತಿ ಯಿಂದ ಸಂಕಷ್ಟಕ್ಕೊಳಗಾದ ಈತ 1782ರಲ್ಲಿ ನಿಧನನಾದ.   	
	(ಯು.ಆರ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ